ರಚನೆ: ಸರ್ವಜ್ಞ

ಇಕ್ಕುವವನೂರಿಗೊಂದಕ್ಕಲೆಂದೆನಬೇಡ
ಅಕ್ಷಯ ಪದವ ಪಡೆದು ಕೈಲಾಸದಿಂ
ದೊಕ್ಕಲಿರಬಂದ ಸರ್ವಜ್ಞ ||

ಈವಂಗೆ ದೇವಂಗೆ ಆವುದಂತರವಯ್ಯ
ದೇವನು ಜಗಕೆ ಕೊಡುವನು ಕೈಯಾರೆ
ಈವನೇ ದೇವ ಸರ್ವಜ್ಞ ||

ಹುಟ್ಟುವಾಗೀ ಧನವ ಮೊಟ್ಟೆಗಟ್ಟಿಳಿದನೇ?
ಕಟ್ಟಕಡೆಯಲ್ಲಿ ಕೊಂಡೊಯ್ಯನಿದನರಿದು
ಕೊಟ್ಟುಂಬ ದಾನಿ ಸರ್ವಜ್ಞ ||

ಇಚ್ಚೆಯನು ಅರಿದಿತ್ತ ನುಚ್ಚೊಂದು ಮಾಣಿಕವು
ಇಚ್ಚೆಯಾ ತೀರ್ದ ಬಳಿಕಿತ್ತ ಮಾಣಿಕವು
ನುಚ್ಚಿನಿಂದತ್ತ ಸರ್ವಜ್ಞ ||

ಆಗ ಬಾ ಈಗ ಬಾ ಹೋಗಿ ಬಾ ಎನ್ನದೇ
ಆಗಲೇ ಕರೆದು ಕೊಡುವನ ಧರ್ಮ ಹೊ
ನ್ನಾಗದೇ ಬಿಡದು ಸರ್ವಜ್ಞ ||

ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಹೊಯ್ಯುವರೇ?
ಕೊಡಬೇಡ ಕೊಡದೆ ಇರಬೇಡ ಧರ್ಮವ
ಬಿಡಬೇಡೆಂದ ಸರ್ವಜ್ಞ ||

ಆಡದೇ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನಧಮ ತಾ
ನಾಡಿ ಕೊಡದವನು ಸರ್ವಜ್ಞ ||

ವಿನಯವಿದ್ದಧಿಕರನು ತನುಗೆಟ್ಟ ಬಡವರನು
ಘನಹೀನವಳಿದು ಕರೆದುಣ್ಣದವನೂಟ
ಶುನಕ ತಿಂದಂತೆ ಸರ್ವಜ್ಞ ||

ಹೊತ್ತಾರೆ ಬಯ್ಗಿಂಗೆ ಮತ್ತೆ ಬಾ ಎಂದೆನುತ
ಹೊತ್ತನೆ ಕೊಂದು ಹುಸಿವವನಿಗಿಂತಲು
ಸತ್ತಾತ ಲೇಸು ಸರ್ವಜ್ಞ ||

ವರ್ಗ: ಸರ್ವಜ್ಞನ ವಚನಗಳು
ವರ್ಗ: ವಚನ ಸಾಹಿತ್ಯ